‘ಕದಿಯೋದೇ ಇದ್ದ್ರೆ ಗೆದ್ದ ಕಥೆ ಕದೀತೀನಿ’ – Love Mocktail 3 ವಿವಾದಕ್ಕೆ ಡಾರ್ಲಿಂಗ್ ಕೃಷ್ಣ ಕಿಡಿ!
Love Mocktail 3 ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ಕ್ಲೈಮ್ ಮಾಡೋದೇ ಕಾಮಿಡಿ” ಎಂದಿರುವ ಅವರು, ಲೀಗಲ್ ಫೈಟ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿರುವ ‘Love Mocktail 3’ ಸಿನಿಮಾದ ಕಥೆ ಕದ್ದ ಆರೋಪಕ್ಕೆ ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. “ಕ್ಲೈಮ್ ಮಾಡೋದೇ ದೊಡ್ಡ ಕಾಮಿಡಿ” ಎಂದು ಹೇಳುವ ಮೂಲಕ ಅವರು ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ‘Love Mocktail 3’ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವಾಗಲೇ, ನಿರ್ದೇಶಕ ರಾಘವೇಂದ್ರ ನಾಯಕ್ ಕಥೆ ಕದ್ದಿದ್ದಾರೆ ಎಂದು ಆರೋಪಿಸಿದ್ದರು. ಈ ವಿಷಯ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಕೃಷ್ಣ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹಂಚಿಕೊಂಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಅವರು, “ನಾನು ಯಾವತ್ತೂ ಕಾಂಟ್ರವರ್ಸಿಯಲ್ಲಿ ಇರೋವನಲ್ಲ. ವರ್ಷಕ್ಕೆ ನೂರಕ್ಕೂ ಹೆಚ್ಚು ಕಥೆಗಳು ಬರುತ್ತವೆ. ಆದರೆ ಅವುಗಳಲ್ಲಿ ಕೆಲವೇ ಕಥೆಗಳನ್ನು ಮಾತ್ರ ನಾವು ಆಯ್ಕೆ ಮಾಡುತ್ತೇವೆ. ನಾವು ರಿಜೆಕ್ಟ್ ಮಾಡಿದವರು ಕೆಲವೊಮ್ಮೆ ಈ ರೀತಿಯ ಆರೋಪಗಳನ್ನು ಮಾಡುತ್ತಾರೆ” ಎಂದು ಹೇಳಿದರು.
ಇನ್ನೂ ತೀವ್ರವಾಗಿ ಪ್ರತಿಕ್ರಿಯಿಸಿದ ಕೃಷ್ಣ, “ಕ್ಲೈಮ್ ಮಾಡೋದೇ ದೊಡ್ಡ ಕಾಮಿಡಿ. ನಾವು ಮೂರು ವರ್ಷ ಪರಿಶ್ರಮಪಟ್ಟು ಕಥೆ ಬರೆದಿದ್ದೇವೆ. ಯಾರಾದರೂ ಅದನ್ನ ತಮ್ಮದು ಅಂತ ಹೇಳಿದರೆ ಅದು ದೊಡ್ಡ ಅವಮಾನ” ಎಂದು ಕಿಡಿಕಾರಿದರು.
ಅವರು ಹಾಗೂ ಮಿಲನಾ ನಾಗರಾಜ್ ಇಬ್ಬರೂ ಕೂಡ ಈ ವಿಷಯವನ್ನು ಲೈಟ್ ಆಗಿ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, “ಲೀಗಲ್ ಆಗಿ ಫೈಟ್ ಮಾಡ್ತೀವಿ” ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಉದಾಹರಣೆ ನೀಡಿದ ಕೃಷ್ಣ, “ರಿಷಬ್ ಶೆಟ್ಟಿ ‘ಕಾಂತಾರ’ ಮಾಡಿದ್ದಾರೆ. ಅದನ್ನ ನಾನು ಬಂದು ನನ್ನ ಕಥೆ ಅಂತ ಹೇಳಿದ್ರೆ ಹೇಗಿರುತ್ತೆ? ಅದು ಅಸಂಬದ್ಧ” ಎಂದು ಹೇಳಿದ್ದಾರೆ.
ಕೊನೆಯಲ್ಲಿ ತಮ್ಮ ಮಾತುಗಳಲ್ಲಿ ಕಟುವಾದ ವ್ಯಂಗ್ಯ ಮಿಶ್ರಣ ಮಾಡುತ್ತಾ, “ನಾನು ಕಾಪಿ ಮಾಡೋದಾದ್ರೆ ಗೆದ್ದ ಕಥೆಗಳನ್ನೇ ಕದೀತೀನಿ. ರ್ಯಾಂಕ್ ಸ್ಟೂಡೆಂಟ್ ಹತ್ತಿರ ಕಾಪಿ ಮಾಡ್ತೀನಿ” ಎಂದು ಹೇಳಿದ್ದಾರೆ.
ಈ ಹೇಳಿಕೆಗಳೊಂದಿಗೆ ‘Love Mocktail 3’ ವಿವಾದ ಇದೀಗ ಇನ್ನಷ್ಟು ಗರಿಗೆದರಿದ್ದು, ಮುಂದಿನ ದಿನಗಳಲ್ಲಿ ಈ ವಿಷಯ ಯಾವ ದಿಕ್ಕಿಗೆ ತಿರುಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.